Thursday 28 June 2012

ಪುಷ್ಪ-4



ಆತ್ಮಕ್ಕೆಲ್ಲಿಯ ಸಾವು?
ಮುಕುಂದೂರ್ ಸ್ವಾಮೀಜಿ ಯವರ ಜೀವನ ಘಟನೆಗಳನ್ನು ಓದುತ್ತಿದ್ದನ್ತೆಲ್ಲಾ ಆನಂದವಾಗುತ್ತೆ. ಅಧ್ಯಾತ್ಮವನ್ನು ಎಷ್ಟು ಸರಳವಾಗಿ ಮನಮುಟ್ಟುವಂತೆ ಹೇಳ್ತಾ ಇದ್ರೂ ಅಂದ್ರೆ......
ಸ್ವಾಮೀಜಿಯವರ ಆಶ್ರಮಕ್ಕೆ ಒಬ್ಬ ಭಕ್ತ ಬರ್ತಾನೆ. " ಸ್ವಾಮಿ ದೊಡ್ದಬೋರೆಗೌಡ ಸತ್ತೋದ " ಎಂದು ದು:ಖದಿಂದ ಹೇಳ್ತಾನೆ.
-ಹಾ! ಸತ್ತು ಹೋದ! ದೊಡ್ದಬೋರೆಗೌಡ !![ನಕ್ಕು] ಎಲ್ಲಾರ ಉಂಟೆ?
-ಇಲ್ಲಾ ಸ್ವಾಮಿ ನಾನೇ ಖುದ್ದು ನೋಡಿ ಬಂದೆ ,ನಿನ್ನೆ ಸತ್ತು ಇವತ್ತು ಮಣ್ಣು ಮಾಡಿ ಅಲ್ಲಿಂದಲೇ ಬರ್ತಾ ಇದ್ದೀನಿ !!
-ಹೌದಾ? ನೀನೇ ಖುದ್ದು ನೋಡಿದ್ಯಾ? ಏನಪ್ಪಾ ಸತ್ತು ಹೋಗೋದು ಅಂದ್ರೆ? ಎಂದರು ಗಂಭೀರವಾಗಿ.
-ಹೌದು ಸ್ವಾಮಿ , ನಾನೇ ನೋಡ್ದೆ ಅಂತೀನಿ.
-ಸರಿ ಬಿಡಪ್ಪಾ, ನೀನೇ ಕಂಡೇ ಅಂದ್ಮ್ಯಾಕೆ ಇನ್ನೇನ್ ಐತೆ? [ಕೃಷ್ಣ ಶಾಸ್ತ್ರಿಗಳ ಕಡೆ ನೋಡುತ್ತಾ......]" ಸ್ವಾಮಿ ಸತ್ತು ಹೊಗೊದುಂಟೆ? ಅದು ಬಂದೂ ಇಲ್ಲಾ, ಹೋಗೋದೂ ಇಲ್ಲಾ. ಅದು ಎಂದೆಂದಿಗೂ ಇರೋದು, ಈ ಯಪ್ಪಾ ನೋಡಿದ್ರೆ ನಾನೇ ಕಂಡೇ ಅಂತಾನೆ,ಎಂಗಪ್ಪಾ ಬಾಳಿ ಬದುಕಿ ಸತ್ತು ವೋಗೋದು? ಇವನಂತೂ ಸತ್ತು ವೋಗಾಕಿಲ್ಲಾ. [ಅವರನ್ನೇ ನೋಡಿಕೊಂಡು ]
" ಹೀಗಂತಾ ಹೇಳಿ ಜೋರಾಗಿ ನಕ್ಕಾಗ ಎಲ್ಲರೂ ಕಕ್ಕಾ-ಬಿಕ್ಕಿ.
ದೇಹಕ್ಕಷ್ಟೇ ಸಾವು, ಆತ್ಮನಿಗೆ ಸಾವಿಲ್ಲಾ!! ಎಂಬುದನ್ನು ಎಷ್ಟು ಸರಳವಾಗಿ ನಿರೂಪಿಸಿಬಿಟ್ರು!!

-------------------------------------------------------------
ಹಿಂಗೇ ಬಿಡದಂಗೆ ಹಿಡ್ಕಂದ್ರೆ ಅವಾ ಬಿಡ೦ಗೇ ಇಲ್ಲಾ!!
ಸ್ವಾಮಿಗಳ ಆಶ್ರಮದ ಮುಂದೆ ನಿಂತು ದೂರಕ್ಕೆ ಕಣ್ಣು ಹಾಯಿಸಿದರೆ ಸಿದ್ಧರ ಬೆಟ್ಟ ಕಾಣುತ್ತೆ. ಆ ಬೆಟ್ಟ ವನ್ನು ಹತ್ತಲು ಕೃಷ್ಣ ಶಾಸ್ತ್ರಿಗಳೊಟ್ಟಿಗೆ ಒಮ್ಮೆ ಸ್ವಾಮೀಜಿ ಹೊರಟರು. ಆಶ್ರಮದಿಂದ ೭-೮ ಮೈಲಿ ನಡೆದು ಬೆಟ್ಟದ ಬುಡ ಸೇರಿದರು. ಸ್ವಾಮೀಜಿಗೆ ಬೆಟ್ಟಹತ್ತುವುದೆಂದರೆ ಬಲು ಸಲೀಸು.ಸ್ವಾಮೀಜಿಯಂತೂ ಬಂಡೆಯಿಂದ ಬಂಡೆಗೆ ಜಿಗಿಯುತ್ತಾ ನಿರಾಯಾಸವಾಗಿ ಹತ್ತುತ್ತಾ ಹೊರಟರು, ಆದರೆ ಕೃಷ್ಣಶಾಸ್ತ್ರಿಗಳಿಗೆ ಆಯಾಸವಾಗ್ತಾ ಇದೆ, ಎಷ್ಟು ಪ್ರಯತ್ನ ಪಟ್ಟರೂ ಸ್ವಾಮೀಜಿ ಯವರೊಟ್ಟಿಗೆ ಹೆಜ್ಜೆ ಹಾಕಲು ಶಾಸ್ತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಒಂದು ಕಡೆಯಂತೂ ಎರಡು ಎತ್ತರವಾದ ಬಂಡೆಗಳ ನಡುವೆ ಆಳವಾದ ಕಂದಕ. ಸ್ವಾಮೀಜಿ ಸಲೀಸಾಗಿ ಜಿಗಿದೇ ಬಿಟ್ಟರು. ಆದರೆ ಶಾಸ್ತ್ರಿಗಳಿಗೆ ಸಾಧ್ಯವಾಗುತ್ತಿಲ್ಲ. ಆಗ ಸ್ವಾಮೀಜಿಯು ತಾವು ತಲೆಗೆ ಸುತ್ತಿದ್ದ ರುಮಾಲು ಬಿಚ್ಚಿ ಹಗ್ಗದಂತೆ ಉದ್ದಮಾಡಿ ಅದರ ಒಂದು ತುದಿಯನ್ನು ಶಾಸ್ತ್ರಿಗಳತ್ತ ಎಸೆಯುತ್ತಾರೆ, " ಈಗ ಹಗ್ಗ ಬಿಗಿಯಾಗಿ ಹಿಡ್ಕಾ ಇವ ನಿನ್ನ ಕರಕೊನ್ಡಾನು! " ಸ್ವಾಮೀಜಿ ನಗುತ್ತಾ ಹೇಳುತ್ತಾರೆ. ಶಾಸ್ತ್ರಿ ರುಮಾಲಿನ ಸಹಾಯದಿಂದ ಬನ್ದೆಮೇಲೇರುತ್ತಾರೆ.
ಸ್ವಾಮೀಜಿ ಮಾರ್ಮಿಕವಾಗಿ ಹೇಳುತ್ತಾರೆ" ನೋಡಪ್ಪಾ ಹಿಂಗೇ ಬಿಗಿಯಾಗಿ ಹಿಡ್ಕಂದ್ರೆ ಇವ ಕೈ ಬಿಡನ್ಗೇ ಇಲ್ಲಾ." ಭಗವಂತನನ್ನು ಕಾಣಲು ಎಷ್ಟು ದೃಢ ವಾದ ನಂಬಿಕೆ ಇರಬೇಕು , ಅನ್ನೋದನ್ನು ಸ್ವಾಮೀಜಿಯವರು ಚಿಕ್ಕ ಚಿಕ್ಕ ಘಟನೆಗಳಲ್ಲೂ ಮನಮುಟ್ಟುವಂತೆ ಹೇಳುತ್ತಿದ್ದ ಪರಿ ಇದು.
-----------------------------------------------------------------------
"ಎಲ್ಲಾ ರೂಪವು ತಾನಂತೆ ಶಿವ ಎಲ್ಲೆಲ್ಲಿಯೂ ಅವ ಇಹನಂತೆ"
ಬೆಟ್ಟವನ್ನು ಹತ್ತಿ ಹತ್ತಿ ಶಾಸ್ತ್ರಿಗಳಿಗೆ ಹೊಟ್ಟೆಯಲ್ಲಿ ಹಸಿವು ಜಾಸ್ತಿಯಾಗಿ ಬಿಟ್ಟಿತು. ಆಯಾಸ ಹೆಚ್ಚಾಗಿ ಬಂಡೆಯ ಮೇಲೆ ಮಲಗಿಬಿಟ್ರು, ಸ್ವಾಮೀಜಿಯಾದರೋ ಪ್ರಕೃತಿಯನ್ನೆಲ್ಲಾ ಬಣ್ಣಿಸ್ತಾ ಇದಾರೆ,
-ಯಾರಿಗೆ ಬೇಕು ಸ್ವಾಮೀಜಿ? ನನಗಂತೂ ತುಂಬಾ ಹಸಿವಾಗಿದೆ.
-ಬೆಟ್ಟಕ್ ಬಂದು ಹಸಿವಾಗ್ತದೆ ಅಂದ್ರೆ ಇಕ್ಕೊರ್ ಯಾರು? ಯೇನಾದ್ರ ಬುತ್ತಿ ತರ್ಬೇಕಿತ್ತಪ್ಪಾ!
- ಇಷ್ಟು ತಡವಾಗುತ್ತೆ ಅಂತಾ ನನಗೆ ಗೊತ್ತಾಗ್ಲಿಲ್ಲವಲ್ಲಾ
-ಅಂಗಾದ್ರೆ ಯಾರಾನ ತಂದಾಕಿದ್ರೆ ತಿಂದ ಬುಡ್ತೀಯಾ? ಹಾಸ್ಯಮಾಡಿ ಸ್ವಾಮೀಜಿ ನಕ್ಕರು, ಶಾಸ್ತ್ರಿಗಳೂ ನಕ್ಕರು.
-ಅಗೋ ಅಲ್ಲಿ ಯಾರೋ ಬಂದಂಗಾತು ,ಅವರನ್ನ ಕೇಳಾಣ " ಸ್ವಾಮೀಜಿ ಮಾತು ಕೇಳಿ ಶಾಸ್ತ್ರಿ ತಿರುಗಿ ನೋಡ್ತಾರೆ , ಯಾರೂ ಇಲ್ಲಾ.
-ಅಗೋ ಅಲ್ಲಿ ನೋಡು , ಆಕಾಶದಲ್ಲಿ ಬಹು ಎತ್ತರದಲ್ಲಿ ಹಾರಾಡ್ ತಿದ್ದ ಎರಡು ಹದ್ದುಗಳನ್ನು ಸ್ವಾಮೀಜಿ ತೋರಿಸಿ ಹೇಳ್ತಾರೆ, " ಎಲೆ ಅಪ್ಪಯ್ಯಗಳಾ ಈ ಹುಡುಗನಿಗೆ ಭಾರಿ ಹಸಿವಾಗೈತೆ, ವಸಿ ಎನಾದರ ಕೊಡ್ರಪ್ಪಾ!
ಸ್ವಾಮೀಜಿ ತಮಾಷೆ ಮಾಡ್ತಾರಲ್ಲಾ ಅಂತಾ ಶಾಸ್ತ್ರಿಗಳಿಗೆ ಬೇಸರವೇ ಆಗುತ್ತೆ,
ಅಷ್ಟರಲ್ಲಿ ಸ್ವಾಮೀಜಿ ಹೇಳ್ತಾರೆ" ಇಗಳಪ್ಪಾ, ಕೊಟ್ಟೆ ಬಿಟ್ರಲ್ಲಾ! ತಕೋ ತಿನ್ನು , ಬಾಳಾ ಹಸ್ದಿದ್ದೀಯಾ ,ಅಂತಾ ಕೈಲಿದ್ದ ಬಾಳೆಹಣ್ಣನ್ನು ಕೊಡ್ತಾರೆ.
-ತಿನ್ನು, ತಿನ್ನು, ಕೇಳಿದ್ರೆ ಇನ್ನೂ ಕೊಡ್ತಾರೆ,
ಶಾಸ್ತ್ರಿ ಹಣ್ಣನ್ನು ನೋಡ್ತಾರೆ; ಆಗತಾನೆ ಗುಡಾಣದಿನ್ದ ತೆಗೆದಂತಿದೆ. ಒಂದಾದ ಮೇಲೊಂದರಂತೆ ಮೂರು ಹಣ್ಣನ್ನು ಕೊಟ್ಟಿದ್ದಲ್ಲದೆ , ಸ್ವಾಮೀಜಿಯವರೂ ಮೂರು ಬಾಳೆ ಹಣ್ಣನ್ನು ತಿಂತಾರೆ.
ಆಗ ಶಾಸ್ತ್ರಿಗಳು ಕೇಳ್ತಾರೆ" ಸ್ವಾಮೀಜಿ ಈ ಹಣ್ಣು ಎಲ್ಲಿಂದ ಬಂತು?
-ಆವಾಗ ಬರೋವಾಗ ಅಲ್ಲೊಬ್ಬ ಬಂದಾ ನೋಡು, ಅವಾಕೊಟ್ಟ.
-ಯಾರು ಸ್ವಾಮೀಜಿ ಅವನು? ನಾನು ನೋಡಲೇ ಇಲ್ಲವಲ್ಲಾ?
-ನೀನು ನೋಡ್ಲಿಲ್ಲಾ ಅಂದ್ರೆ ಅವನು ಬಂದೆ ಇಲ್ಲಾ ಅನ್ನು? ಅವನು ಇಲ್ವೆ ಇಲ್ಲಾ ಅನ್ನು?
ಶಾಸ್ತ್ರಿಗಳಿಗೆ ಎಲವೂ ವಿಸ್ಮಯವಾಗಿ ಕಾಣುತ್ತೆ.
ಸ್ವಾಮೀಜಿ ನಗ್ತಾ ಹಾಡ್ತಾರೆ" ಎಲ್ಲಾ ರೂಪವೂ ತಾನಂತೆ ಶಿವಾ, ಎಲ್ಲೆಲ್ಲಿಯೂ ಅವಾ ಇಹನಂತೆ,
ಕಾಣಲಾರದವರಿಗೆ ಕಲ್ಲಂತೆ.....ಅವ ಇಲ್ಲಂತೆ...
ಹೀಗೆ ಅದೆಷ್ಟು ಘಟನೆಗಳೋ!
ಸ್ವಾಮೀಜಿಯವರೊಡನೆ ಶಾಸ್ತ್ರಿಗಳಿಗಾದ ಇಂತಹ ಅನುಭವಗಳನ್ನು ಓದುತ್ತಾ ಇದ್ದರೆ ಮೈ ಝುಂ .. ಎನ್ನುತ್ತೆ.
--------------------------------------------------------------


ಮನವಿ:

 ಶ್ರೀ ಬೆಳೆಗೆರೆ ಕೃಷ್ಣಶಾಸ್ತ್ರಿಗಳ  ಹತ್ತಾರುವರ್ಷಗಳ ಸ್ವಾಮೀಜಿಯವರ ಒಡನಾಟದ ಪರಿಣಾಮವಾಗಿ ಬಟ್ಟಿ ಇಳಿಸಿರುವ "ಯೇಗ್ ದಾಗೆ ಐತೆ "  ಪುಸ್ತಕದಿಂದ ಪ್ರೇರಿತರಾಗಿರುವ  ಹಾಸನದ    ಶ್ರೀ ಕವಿನಾಗರಾಜ್, ಶ್ರೀ ಪ್ರಕಾಶ್,ಬೇಲೂರಿನ ಡಾ.ಶ್ರೀವತ್ಸ ವಟಿ ಯವರು ಸೇರಿದಂತೆ ಕೆಲವು ಆತ್ಮೀಯರು ಸೇರಿ ಶ್ರೀ ಮುಕುಂದೂರು ಸ್ವಾಮಿಗಳ ಬಗ್ಗೆ ಪ್ರಕಟವಾಗದೇ ಇರಬಹುದಾದ    ಇನ್ನಷ್ಟು  ಮಾಹಿತಿಗಳನ್ನು  ಸಂಗ್ರಹಿಸಲು ಚಿಂತನೆ ನಡೆಸಿದ್ದೇವೆ. ಸ್ವಾಮೀಜಿಯವರು ಅರಸೀಕೆರೆ ತಾಲ್ಲೂಕು ಮತ್ತು ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ     ಸಾಕಷ್ಟು  ಓಡಾಟ ನಡೆಸಿರುವಂತಿದೆ.  ಹಾಗೂ ಹೊಳೇ ನರಸೀಪುರ ತಾಲ್ಲೂಕಿನ ಮುಕುಂದೂರು ಬೆಟ್ಟದಲ್ಲಿ ಕೆಲವು ಕಾಲ ತಪಸ್ಸು ಮಾಡಿ ಅವರಿಗೆ ಮುಕುಂದೂರಜ್ಜ ಅಥವಾ ಮುಕುಂದೂರು ಸ್ವಾಮಿಗಳು ಎಂಬ ಹೆಸರು ಬಂದಿದೆ.   ಈ ಭಾಗಗಳ ಪರಿಚಯವಿರುವ ಓದುಗ ಮಿತ್ರರು ಈ ಸತ್ಕಾರ್ಯದಲ್ಲಿ ಕೈಜೋಡಿಸಬೇಕಾಗಿ ಕೋರುವೆ.
ನೀವೇನು ಮಾಡಬಹುದು?
1. ಮುಕುಂದೂರು ಸ್ವಾಮಿಗಳ ಹೆಸರು ತಿಳಿದವರ ಮಾಹಿತಿ ನಮಗೆ ಕೊಡಿ.ಅವರನ್ನು ಭೇಟಿಯಾಗಲನುಕೂಲವಾಗುವ ವಿಳಾಸ ಮತ್ತು ದೂರವಾಣಿ ಸಂಖ್ಯೆ ಕೊಡಿ
2. ನಿಮಗೆ ಸಾಧ್ಯವಾದರೆ ಅವರ ಸಂದರ್ಶನ ನಡೆಸಿ ವೀಡಿಯೋ ಕ್ಲಿಪ್ ನಮಗೆ ಕಳಿಸಿಕೊಡಿ.
3. ಒಂದು ವಿಚಾರ ಸ್ಪಷ್ಟವಿರಲಿ. ಸ್ವಾಮೀಜಿಯವರು ಯಾವುದೇ ಸಂಪ್ರದಾಯ ಪೋಷಕರಲ್ಲ.
4. ನಮಗೆ ಅಗತ್ಯವಿರುವುದು ಅವರ ನೇರವಾದ ಆಧ್ಯಾತ್ಮಿಕನುಡಿಗಳು. ನೆನಪಿರಲಿ ಸ್ವಾಮೀಜಿಯವರು  ವಿಗ್ರಹದಲ್ಲಿ ಮಾತ್ರ ದೇವರನ್ನು ಕಂಡವರಲ್ಲ. ಪ್ರಕೃತಿಯಲ್ಲಿರುವ ಗಿದಮರ ಬಳ್ಳಿಗಳು, ಬಂಡೆಗಳು,ಪ್ರಾಣಿ ಪಕ್ಷಿಗಳನ್ನು ಮನುಷ್ಯನಷ್ತೇ ಸಹಜವಾಗಿ ಮಾತನಾಡಿಸುತ್ತಿದ್ದವರು. ಆದ್ದರಿಂದ ಈ ತಲಹದಿಯಮೇಲೆ  ನೀವು ಮಾತನಾಡಿಸುವವರಿಂದ ಮಾಹಿತಿ ಪಡೆಯುವುದು ಉತ್ತಮ.





ಪುಷ್ಪ-3

ತೋಟದ ಹಾದಿಯಲ್ಲಿ ಹೊರಟವರು ಆಶ್ರಮ ತಲುಪಿದೆವು.  ಅಲ್ಲಿನ ಒಬ್ಬ ಕೆಲಸಗಾರ  ಎಲ್ಲಾ ತೋರಿಸಿದವನು "ಕಾಫಿ ಮಾಡಿಸಿಕೊಂಡು ಬರಲಾ? ಬುದ್ಧಿಯೋರು ಮಲಗವ್ರೆ, ಅಂದ.
-ಪರವಾಗಿಲ್ಲ ,ನಾವು ಇಲ್ಲೇ ಎಲ್ಲಾ ನೋಡಿಕೊಂಡು ಎಲ್ಲಾ ನೋಡ್ತಾ ಇತೀವಿ..ಆಮೇಲೆ ಸ್ವಾಮೀಜಿ ನೋಡೋಣ, ಎಂದೆವು. ಆ ವ್ಯಕ್ತಿ ಆಶ್ರಮದ ಆವರಣದಲ್ಲಿರುವ ದೇವಾಲಯ, ಧ್ಯಾನ ಮಂದಿರ [ಈಗ ಕಲ್ಯಾಣ ಮಂಟಪವಾಗಿ        ಉಪಯೋಗವಾಗುತ್ತಿದೆ]   ಮುಕುಂದೂರು ಸ್ವಾಮಿಗಳಗದ್ದುಗೆ. ಸ್ವಾಮಿಗಳು ತಪಸ್ಸು ಮಾಡುತ್ತಿದ್ದ ಗುಹೆ, ಅವರು ಪೂಜಿಸುತ್ತಿದ್ದ  ಈಶ್ವರ ವಿಗ್ರಹ..ಎಲ್ಲವನ್ನೂ ನೋಡಿಕೊಂಡು ಸುತ್ತಮುತ್ತ ಇರುವ ಹಿರಿಯ ವ್ಯಕ್ತಿಗಳಿಂದ ಸ್ವಾಮಿಗಳ ಬಗ್ಗೆ ಒಂದಿಷ್ಟು ಮಾಹಿತಿ ಪಡೆಯೋನ ಎಂದು ಆಶ್ರಮದ ಹೊರಗೆ ಹೆಜ್ಜೆ ಹಾಕಿದೆವು. ಆಗ ಭೇಟಿಯಾದ ಮೊದಲ ವ್ಯಕ್ತಿಯನ್ನು ಮಾತನಾಡಿಸಿದಾಗ.......

[ವೀಡಿಯೋ ನೋಡುವುದು ಹಲವು ಭಾರಿ ಪ್ರಯಾಸದ ಕೆಲಸ. ಇದರ ಆಡಿಯೊ ಕೂಡ ಇಲ್ಲೇ ಕೆಳಗಿದೆ. ಆಡಿಯೋ ಕೇಳುವುದು ಸುಲಭ.]

ಈ ವ್ಯಕ್ತಿಯೊಡನೆ ಮಾತನಾಡುವಾಗ ಒಂದಂಶವಂತೂ ಸ್ಪಷ್ಟವಾಯ್ತು.ಸ್ವಾಮೀಜಿಯವರು ತಮ್ಮ ಭೌತಿಕ ಶರೀರವನ್ನು ತ್ಯಜಿಸಿದ ದಿನ ತಮಗೂ ದೇಹಮುಕ್ತಿ ಕೊಡಬೇಕೆಂದು ಪ್ರಾಥಿಸಿದವರು ಗೌರಜ್ಜಿ ಎಂಬ ಅಂಶ ಯೇಗ್ ದಾಗೆಲ್ಲಾ ಐತೆ ಪುಸ್ತಕದಲ್ಲಿ ಪ್ರಕಟಗೊಂದಿದೆ. ಆದರೆ ಆ ವ್ಯಕ್ತಿ ಗೌರಜ್ಜಿಯಲ್ಲಾ ಅವ೫ರು ಶರಣಮ್ಮ ಎಂದು ಅಂದು ಘಟನೆಯನ್ನು ಕಣ್ಣಾರೆ ಕಂಡವರು ಹೇಳಿದ್ದಾರೆ. ಸ್ವಾಮೀಜಿಯವರ ಬಗ್ಗೆ ಇಷ್ಟೆಲ್ಲಾ ವಿಚಾರಗಲನ್ನು ನಮಗೆ ತಿಳಿಯುವಂತೆ ಮಾಡಿರುವ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳ ವಯೋಮಾನದ ಸಹಜ ಕುಂದಿದ ನೆನಪಿನ ಶಕ್ತಿಯ ಪರಿಣಾಮ ಹೆಸರು ಬದಲಾಗಿರಬಹುದು. ಆದರೆ ಧಾಖಲೆಯಲ್ಲಿ ತಪ್ಪಾಗದಿರಲಿ ಎಂದು ಈ ಅಂಶವನ್ನು ಪ್ರಕಟಿಸಿರುವೆ

 

 ಸ್ವಾಮೀಜಿಯವರ ಆಶ್ರಮದ ಭೇಟಿಯ ವಿಚಾರ ತಿಳಿದ ಮಿತ್ರ ಪ್ರಕಾಶ್ ಅವರು ಮಾಡಿರುವ ಪ್ರತಿಕ್ರಿಯೆಗೆ ಓದುಗರಿಗೆ ವಿಷಯ ತಲುಪಲೆಂಬ ಕಾರಣಕ್ಕೆ ಮುಖ್ಯ ಲೇಖನದಲ್ಲಿಯೇ ಪ್ರತಿಕ್ರಿಯಿಸಿರುವೆ.
 -ಹರಿಹರಪುರ ಶ್ರೀಧರ್ 

 ಆತ್ಮೀಯ ಪ್ರಕಾಶ್,
ನಿಜವಾಗಿ ನೋಡಲೇ ಬೇಕಾದ ಸ್ಥಳ.ಆದರೆ ಅಲ್ಲಿ ಏನ್ ಆಗಿದೆ ಅಂದ್ರೆ ಯಾವ ವಿಚಾರವನ್ನು ಸ್ವಾಮಿಗಳು ಹೃದಯಂಗಮ ಮಾಡಿಕೊಂದಿದ್ದರೋ ಅದನ್ನು ಬದಿಗಿಟ್ಟು ಅವರ ಆಶ್ರಮ ಅವರ ಹೆಸರಲ್ಲೇ ಒಂದು ಸಂಪ್ರದಾಯದ ಚೌಕಟ್ಟಿನಲ್ಲಿ ನಡೆಯುತ್ತಿದೆ. ಅದು ಅಲ್ಲಿನ ಜನರ ತಪ್ಪೆಂದು ನಾನು ಭಾವಿಸುವುದಿಲ್ಲ. ಆದರೆ ಸ್ವಾಮಿಗಳ ವಿಚಾರವನ್ನು ಒಪ್ಪಿರುವ ಸಹಸ್ರಾರು ಜನರು ಮುಂದೆ ಬಂದರೆ ನಿಜವಾಗಲೂ ಸ್ವಾಮಿಗಳ ವಿಚಾರವನ್ನು ಹರಡುವಂತೆ ಮಾಡಿದರೆ ನಿಜವಾದ ಅಧ್ಯಾತ್ಮದ ಕೆಲಸ ಅದಾಗುವುದರಲ್ಲಿ ಸಂಶಯವಿಲ್ಲ. ಸ್ವಾಮಿಗಳದ್ದು ಸ್ವತ: ತಪೋನುಭವ. ಭಾಷೆಯನ್ನೂ ಕಲಿಯದ ಅವರು ತಮಗೆ ತಿಳಿದಿದ್ದ ಹಳ್ಳಿ ಭಾಷೆಯಲ್ಲಿ ಬಹಳ ಮುಗ್ಧವಾಗಿ ಅಧ್ಯಾತ್ಮವನ್ನು ತಿಳಿಸುವ ಶೈಲಿಯಲ್ಲಿ ನಾವೂ ಕೂಡ  ಮಗುವಾಗಿಬಿಡುತ್ತೇವೆ. ಸ್ವಾಮಿಗಳು ಓಡಾಡಿದ ಸ್ಥಳಗಳಲ್ಲಿ ಈಗಲೂ ಅರವತ್ತಕ್ಕಿಂತ ಹೆಚ್ಚು ವಯಸ್ಸಾಗಿರುವ ಹಿರಿಯ ಜೀವಿಗಳಿಂದ ಸ್ವಾಮೀಜಿಯವರ ವಿಚಾರದ ಮೇಲೆ ಬೆಳಕು ಚೆಲ್ಲುವ ಸಂಗತಿಗಳನ್ನು ಸಂಗ್ರಹಿಸಲು ಇದುವೇ ಸಕಾಲ. ವರ್ಷ ಕಳೆದಂತೆ ಹಳಬರು ಇಲ್ಲವಾಗುತ್ತಾರೆ. ಇದುವರೆವಿಗೆ ಪ್ರಕಟವಾಗದೆ ಉಳಿದಿರುವ ಹಲವಾರು ಸಂಗತಿಗಳು ಕಾಲಗರ್ಭ ಸೇರಿಹೋಗುತ್ತವೆ.ಈಗ ಆ ದಿಕ್ಕಿನಲ್ಲಿ ಪ್ರಯತ್ನ ಮಾಡುವುದಾದರೆ ಸಮಾನ ಮಾನಸಿಕರ ಜೊತೆ ಪೂರ್ಣವಾಗಿ ಕೈ ಜೋಡಿಸಲು ನಾನಂತೂ ಸಿದ್ಧ.
------------------------------------------------------------------------
ಕೃಷ್ಣಶಾಸ್ತ್ರಿಗಳು ಶಾಲೆಯಲ್ಲಿ ಪಾಠ ಮಾಡ್ತಾ ಇರ್ತಾರೆ.ಇದ್ದಕ್ಕಿದ್ದಂತೆ ಮುಕುಂದೂರು ಸ್ವಾಮಿಗಳು ಶಾಲೆಗೆ ಬಂದುಬಿಡ್ತಾರೆ."ನಾನೂ ಒಂದಿಷ್ಟು ಪಾಠ ಕೇಳ್ತೀನಿ ಮಗಾ!" ಸ್ವಾಮಿಗಳ ಮಾತು ಕೇಳಿದ ಶಾಸ್ತ್ರಿಗಳಿಗೆ ಏನೂ ಹೇಳಲು ತೋಚಲೇ ಇಲ್ಲ. ಕೊನೆಯ ಬೆಂಚ್ ಮೇಲೆ ಸ್ವಾಮಿಗಳು ಕುಳಿತಿದ್ದು ಆಯ್ತು. " ನಿನ್ನ ಪಾಡಿಗೆ ನೀನು ಪಾಠ ಮಾಡು " ಸ್ವಾಮಿಜಿ ಅಪ್ಪಣೆ ಕೊಡಿಸಿದರು. ತೂಗಿ ಹಾಕಿದ್ದ ಭೂಪಟದಲ್ಲಿ ಬಂಗಾಳಕೊಲ್ಲಿ,ಅರಬ್ಬೀ ಸಮುದ್ರ, ಕಲ್ಕತ್ತಾ, ಬೊಂಬಾಯಿ, ಎಲ್ಲಾ ತೋರಿಸಿ ಪಾಠ ಮಾಡಿ ಮುಗಿಸಿದ್ದಾಯ್ತು. ಸ್ವಾಮೀಜಿ ಜೊತೆ ಶಾಸ್ತ್ರಿಗಳು ಹೊರಗೆ ಹೊರಟರು. ಸ್ವಾಮೀಜಿ " ಚೆನ್ನಾಗಿ ಪಾಠ ಮಾಡ್ತೀಯ." ಎಂದಾಗ ಶಾಸ್ತ್ರಿಗಳು" ಚೆನ್ನಾಗಿ ಮಾಡ್ತೀನಾ? ಸ್ವಾಮಿ ಎಂದು ಮತ್ತೆ ಕೇಳಿದರು. " ಹೌದು, ಸಮುದ್ರ ನೋಡಿದ್ದೀಯಾ? ಅಂತ ಮಕ್ಕಳನ್ನು ಯಾರಾದ್ರೂ ಕೇಳಿದ್ರೆ, ಅವರು ಏನ್ ಹೇಳತಾರೆ? ಇಸ್ಕೂಲಲ್ಲಿ ಪಟ ಹಾಕಿದ್ರು ಅದರಲ್ಲಿ ನೋಡಿದ್ದೀನಿ, ನೀವೂ ಪಟ ಹಾಕಿ, ಅದರಲ್ಲಿ ತೋರಿಸ್ತೀನಿ,ಅಂತಾವೆ ಅಲ್ವಾ? "ಅಂಗೇನೆ ಸನ್ಯಾಸೀನ "ದೇವರು ತೋರಿಸಿ" ಅಂದ್ರೆ ಗುಡಿಬಾಗಿಲು ತೆಗಿ" ಅಂತಾನೆ. ಗುಡಿ ವಿಗ್ರಹದಲ್ಲಿ ದೇವರು ಐತಾ? " ಸ್ವಾಮೀಜಿ ಮಾತಿನ ಅಂತರಾಳ ಅರ್ಥಮಾಡಿಕೊಂಡು ಶಾಸ್ತ್ರಿಗಳು ಬೆಪ್ಪಾಗಿ ನಿಲ್ತಾರೆ. ಮುಂದೆ ಸ್ವಲ್ಪ ದೂರದಲ್ಲಿ ಹೆದ್ದಾರಿ ಕಾಣುತ್ತೆ. " ನೋಡು ನಾವೀಗ ಸಣ್ಣ ದಾರಿಯಿಂದ ದೊಡ್ಡ ರಸ್ತೆ ಸೇರ್ತೀವಿ.ದೊಡ್ಡರಸ್ತೆ ಸಿಕ್ಕಿದ ಕೂಡ್ಲೆ ನಮಗೆ ಊರೇ ಸಿಕ್ತು ಅಂತಾ ಹೇಳಕ್ಕಾಯ್ತದ? ಸರಿಯಾಗಿ ಹೋಗಿಲ್ಲಾ ಅಂದ್ರೆ ಊರು ಸಿಕ್ದೆ ಇನ್ನೆಲ್ಲೋ ಹೋಗ್ ಬಹುದು ಅಲ್ವಾ? ಎಚ್ಚರ ಇರ್ಬೇಕಪ್ಪಾ!! ಸ್ವಾಮೀಜಿ ಮಾತು ಎಷ್ಟು ಅರ್ಥ ಗರ್ಬಿತ ಅಲ್ವಾ? ಇದಕ್ಕೆ ವಿವರಣೆ ಬೇಕಾಗಿಲ್ಲಾ, ಅಲ್ವಾ?

-----------------------------------------------------------------

ಮನವಿ: ಆಶ್ರಮಕ್ಕೆ ನಾವು ಹೋದವರು ಆಶ್ರಮದ ಜೊತೆಗೆ ಸುತ್ತ ಮುತ್ತಲಿನ ಕೆಲವರನ್ನು    ಅವರಿಂದ  ಮಾಹಿತಿ ಪಡೆಯುವ ಸಲುವಾಗಿ ಮಾತನಾಡಿಸಿದ್ದೇವೆ.  ಅಂತಹ ವೀಡಿಯೋ ಗಳನ್ನು ಪ್ರಕಟಿಸುತ್ತಾ  ಗ್ರಂಥದ ಕೆಲವು ಆಯ್ದ ಭಾಗಗಳನ್ನು  ಇನ್ನೂ ಹಲವು ಭಾಗಗಳಲ್ಲಿ ಪ್ರಕಟಿಸಲಿದ್ದೇವೆ.

ಹಿಂದಿನ ಭಾಗಗಳಿಗಾಗಿ ಕೊಂಡಿ:

ಯೇಗ್ ದಾಗೆಲ್ಲಾ ಐತೆ-ಬೆನ್ನು ಹತ್ತಿ ಹೊರಟಾಗ- ಭಾಗ-2


ಯೇಗ್ ದಾಗೆಲ್ಲಾ ಐತೆ-ಬೆನ್ನು ಹತ್ತಿ ಹೊರಟಾಗ- ಭಾಗ-1



ಪುಷ್ಪ -2

ಮಿತ್ರರಾದ ಅರಸೀಕೆರೆ ಸುಬ್ಬಣ್ಣ ನವರಿಗೆ ಫೋನ್ ಮಾಡಿದಾಗ  ಅವರು  ಯಗಟಿ ಎಂಬ ಊರಿಗೆ  ಬಸ್ ಪ್ರಯಾಣ ಮಾಡ್ತಾಇದ್ರು. " ಸಾsssರ್ ,ಎಂತಾ ಕೆಲ್ಸಾ ಆಯ್ತು, ನಾನೂ ಬಂದ್ ಬಿಡ್ತಾಇದ್ದೆ,ಕುಟುಂಬ ಸಮೇತ ಯಗಟಿಗೆ ಹೋಗ್ತಾ ಇದೀವಿ.ಏನ್ ಮಾಡೋದು"ಅಂದ್ರು.
-’ಪರವಾಗಿಲ್ಲಾ, ಸುಬ್ಬಣ್ಣ, ಇನ್ನೊಮ್ಮೆ ಒಟ್ಟಿಗೆ ಹೋಗೋಣ, ಇವತ್ತು ನಾನು ಹೋಗಲು ದಾರಿ ಹೇಳಿ" ಎಂದಾಗ ಸರಿಯಾಗಿ ಹೇಳಿದರು.

-"ಅರಸೀಕೆರೆಯಿಂದ ಬಾಣಾವರಕ್ಕೆ ಹೋಗಿ. ಅಲ್ಲಿಂದ ಜಾವಗಲ್ ಬಸ್ ಹತ್ತಿ    ಅರಕೆರೆಯಲ್ಲಿ ಇಳಿದುಕೊಳ್ಳಿ, ಅರಕೆರೆಯಲ್ಲಿ ಯಾರನ್ನಾದರೂ "ವಿರಕ್ತ ಮಠ ಎಲ್ಲಿ" ಅಂದ್ರೆ  ಹೇಳ್ತಾರೆ.  ಅರಕೆರೆ  ಮುಖ್ಯ ರಸ್ತೆ ಯಿಂದ ಒಂದು ಕಿಲೋ ಮೀಟರ್ ದೂರ ಕಚ್ಚಾ ರಸ್ತೆಯಲ್ಲಿ ಕಾಲು ನಡಿಗೆಯಲ್ಲಿ ಹೋಗ ಬೇಕು:-ಅಂದ್ರು.   ಅಲ್ಲಿಗೆ ತಲುಪಿದಷ್ಟೇ ಸಮಾಧಾನವಾಯ್ತು.

ಅಷ್ಟು ಹೊತ್ತಿಗೆ  ಕವಿನಾಗರಾಜ್ ಫೋನ್ ಮಾಡಿದರು-ಎಂಟು ಗಂಟೆ ಗೇ ಹೊರಡಲು ನನಗೆ ಸಾಧ್ಯವಾಗುವುದಿಲ್ಲ. ನೀವು ಹೋಗಿ ಬನ್ನಿ, ಎಂದ್ರು. ನಾನು ಮತ್ತೆ ನಿಮಗೆ ಫೋನ್ ಮಾಡುವೆನೆಂದು ಅವರಿಗೆ ತಿಳಿಸಿ ,ಬೇಲೂರಿನಲ್ಲಿರುವ ಮಿತ್ರ ಡಾ. ಶ್ರೀವತ್ಸ ಎಸ್.ವಟಿಯವರಿಗೆ ಫೋನ್ ಮಾಡಿ.-"ವಟಿ ಹೀಗೆ ಮಾಡಬಹುದಾ?"-ಎಂದು ಆಕ್ಷೇಪಿಸುವಂತೆ ಮಾತು ಆರಂಭಿಸಿದೆ.
-"ಏನ್ ಮಾಡ್ದೇ ಸ್ವಾಮಿ?"
-ನೀವು ನನ್ನನ್ನು   ಅರಕೆರೆಕೆ ಕರೆದುಕೊಂಡು ಹೋಗಿದ್ದಿರೀ ತಾನೇ? ಅಲ್ಲಿ ಬರೀ ದೇವಸ್ಥಾನ ತೋರಿಸಿಕೊಂಡು ಅದರ ಬಗ್ಗೆ  ಪತ್ರಿಕೆಗೆ ಲೇಖನ ಮಾಡಿಸಿದಿರೇ ಹೊರತೂ ಅಲ್ಲಿ "ಮುಕುಂದೂರು ಸ್ವಾಮಿಗಳ ಆಶ್ರಮವನ್ನೇ ತೋರಿಸಲಿಲ್ಲವಲ್ಲಾ! ತಪ್ಪಲ್ವಾ?

-ಅಲ್ಲೆಲ್ಲಿದೆ, ಆಶ್ರಮ ? ನಿಮಗ್ಯಾರು ಹೇಳಿದ್ರು?

-ಅಲ್ಲಿ ಇರೋದು ಗೊತ್ತಾಗಿದೆ. ನಾನು ಹೋಗ್ತಾ ಇದೀನಿ. ಬರ್ತೀರೋ?

-ಈಗೆಲ್ಲಾಗುತ್ತೆ ಸ್ವಾಮಿ?

-ಅದೇನೋ ನಂಗೊತ್ತಿಲ್ಲ. ನಾನು ಅರ್ಸೀಕೆರೆ ಮಾರ್ಗ ಬರ್ತೀನಿ. ನೀವು ಕಳೇಬೀಡುಮಾರ್ಗ ಬನ್ನಿ. ಅಷ್ಟೆ. ಅಂದೆ

ನಾಗರಾಜ್ ಗೆ  ಫೋನ್ ಮಾಡಿ "ಸಾರ್ 10.00 ಗಂಟೆಗೆ  ಮತ್ತೊಂದು ಟ್ರೈನ್ ಇದೆ. ಹೊರಡುತ್ತೀರಾ?" ಎಂದೆ

-ಆಯ್ತು ಶ್ರೀಧರ್. ನಾನು ನೇರವಾಗಿ ರೈಲ್ವೆ ಸ್ಟೇಶನ್ ಗೇ ಬರ್ತೀನಿ, ಅಂದ್ರು.

ಅವರಾಗಲೇ 9.30 ಕ್ಕೆ ರೈಲ್ವೆ ಸ್ಟೇಶನ್ ತಲುಪಿ ನನಗೆ ಫೋನಾಯಿಸಿ"ಏನೂ ಎಲ್ಲಿದ್ದೀರಿ?" ಎಂದ್ರು

ಆಗ ನಾನು ಆಟೋ ಹತ್ತಿ   ಸ್ಟೇಶನ್     ತಲುಪಿದರೆ ಟ್ರೈನ್ ಒಂದು ಗಂಟೆ ತಡವಾಗಿಬಂತು. ಆ ಹೊತ್ತಿಗೆ ವಟೀ ಕೂಡ ತಾವು ನೇರವಾಗಿ ಅರಕೆರೆಗೆ ಬರುವುದಾಗಿ ಫೋನ್ ಮಾಡಿದ್ರು. ನಾವು ಅರಸೀಕೆರೆ ತಲುಪಿ ಬಸ್ಸ್ ನಲ್ಲಿ ಅರಕೆರೆ ತಲುಪುವಹೊತ್ತಿಗೆ, ವಟೀ ಅಲ್ಲಿ ಹಾಜರಿದ್ದರು. ಮೂವರೂ ತೋಟದ ದಾರಿಯಲ್ಲಿ ಅಶ್ರಮದತ್ತ ಹೆಜ್ಜೆ ಹಾಕಿದೆವು........



                         

ಪುಷ್ಪ-1

ಈಗ್ಗೆ ಐದಾರು ವರ್ಷಗಳ ಹಿಂದೆ  ನಮ್ಮ ಇಲಾಖೆಯ[ಕೆ.ಪಿ.ಟಿಸಿಎಲ್] ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ವೈ.ವಿ.ವೆಂಕಟಕೃಷ್ಣ ನನ್ನೊಡನೆ ಮಾತನಾಡುತ್ತಾ "ನೀವು ಯೇಗ್ ದಾಗೆಲ್ಲಾ ಐತೆ "ಪುಸ್ತಕ ಓದಿದ್ದೀರಾ? " ನಿಮ್ಮಂತವರು ಆ ಪುಸ್ತಕ ಓದಬೇಕು ಅಂತಾ ತಮ್ಮೊಡನಿದ್ದ   ಪುಸ್ತಕ [ಅದು ಮೊದಲ ಮುದ್ರಣವಿರಬೇಕು] ವನ್ನು ತೋರಿಸಿದರು. ಸರಿ "ಕೊಡಿ ಓದಿ ಕೊಡ್ತೀನೆಂದೆ. ಒಂದೆರಡು ದಿನಗಳಲ್ಲಿ ಕೊಟ್ಟುಬಿಡಬೇಕೆಂದು ಕೊಡುವಾಗಲೇ ಹೇಳಿ ಕೊಟ್ಟರು. ನನ್ನ ಕೆಲಸಗಳ ಒತ್ತಡದಲ್ಲಿ ಎರಡು ದಿನಗಳಲ್ಲಿ  ಆ ಪುಸ್ತಕವನ್ನು ಪೂರ್ಣವಾಗಿ ಓದಲಾಗಲಿಲ್ಲ. ಅಲ್ಲಲ್ಲಿ ಕೆಲವು ಪುಟ ಓದಿ ಕುತೂಹಲ ಮೂಡಿಸಿಕೊಂಡಿದ್ದೆ. ಅಷ್ಟರಲ್ಲಿ ಅವರಿಗೆ ಆ ಪುಸ್ತಕ ಹಿಂದಿರುಗಿಸಬೇಕಾಗಿ ಬಂತು. ಆನಂತರ ಒಂದೆರಡು ವರ್ಷಗಳು ಆ ಪುಸ್ತಕ ನೋಡಲಿಲ್ಲ. ಪುನ: ನನ್ನ ಅಂತರ್ಜಾಲದ ಚಟುವಟಿಕೆ ಆರಂಭವಾದಮೇಲೆ ಕಳೆದ ಎರಡು ಮೂರು ವರ್ಷಗಳಲ್ಲಿ ಮಿತ್ರರಾದ ಎಂ.ಡಿ.ಎನ್. ಪ್ರಭಾಕರ್  ಕೃಪೆಯಿಂದ  ಯೋಗ ಕೂಡಿ ಬಂತು" ಹೊಸ ಮುದ್ರಣವಾದ "ಯೇಗ್ದಾಗೆಲ್ಲಾ ಐತೆ" ನನ್ನ ಕೈ ತಲುಪಿತು. ಒಂದೆರಡು ಭಾರಿ ಓದಿದೆ. ಕುತೂಹಲ ಇಮ್ಮಡಿ ಯಾಗ್ತಾಹೋಯ್ತು. ನನ್ನ ಬ್ಲಾಗ್ ನಲ್ಲಿ  ಕೆಲವು ಪುಟ ಬರೆದೆ. ಪುನ: ಒಂದೆರಡು ವರ್ಷ ಬಿಡುವು. ಮೊನ್ನೆ ಯಾಕೋ ಮತ್ತೆ ನೆನಪಾಯ್ತು.  ಮುಕುಂದೂರು ಸ್ವಾಮಿಗಳ ಬಗ್ಗೆ  ಬರೆಯ ಬೇಕೆನಿಸಿತು. ಆರಂಭಮಾಡಿದ್ದು  ಸ್ವಾಮೀಜಿಯವರು ಶರೀರ ತ್ಯಜಿಸಿದ ದಿನ  ಶ್ರೀ ಬೆಳೆಗೆರೆ        ಕೃಷ್ಣ ಶಾಸ್ತ್ರಿಗಳಿಗೆ ಆದ  ದಿವ್ಯಾನುಭವ ಘಟನೆಯಿಂದ. 

ಯಾಕೋ ನನ್ನ ಮನದಲ್ಲಿ ಸ್ವಾಮಿಗಳ ಸ್ಮರಣೆ ತುಂಬಿತ್ತು." ಮುಕುಂದೂರು ಎಂಬ ಹಳ್ಳಿ ನಮ್ಮೂರಿನ ಸಮೀಪದಲ್ಲಿದೆ. ಅಲ್ಲಿನ ಸಿದ್ಧ ಪುರುಷರ ಬಗ್ಗೆಯೇ  ನನಗೆ ಅರಿವಿಲ್ಲವಲ್ಲಾ! " ನಾನು ಬರೆಯುವುದಕ್ಕಿಂತ ಮೊದಲು ಮುಕುಂದೂರು ಸ್ವಾಮೀಜಿ ಇದ್ದ ಜಾಗವನ್ನು ನೋಡಿ ಬರಬೇಕು " ಎಂದುಕೊಂಡೆ. ರಾತ್ರಿ  ಹನ್ನೆರಡವರೆಗೂ " ಯೇಗ್ ದಾಗೆಲ್ಲಾ ಐತೆ" ಪುಸ್ತಕದ ಕೆಲವು ಪುಟ ಓದಿದೆ. ಆಗಲೇ ನಿರ್ಧರಿಸಿದೆ. ಬೆಳಗಾಗೆದ್ದರೆ ಭಾನುವಾರ ಹೋಗಿಬಂದು ಬಿಡೋಣ..ಅವರಿದ್ದುದು ಅರಸೀಕೆರೆಯ ತಾಲ್ಲೂಕು ಬಾಣಾವರದ ಸುತ್ತಮುತ್ತ. ಅವರು ದೇಹತ್ಯಾಗ ಮಾಡಿರುವುದೂ ಅಲ್ಲೇ ಎಂದು ಪುಸ್ತಕದಿಂದ ಗೊತ್ತಾಗಿದೆ. ಸರಿ ಅರಸೀಕೆರೆರೆ ಮೂಲಕ ಬಾಣಾವರಕ್ಕೆ ಹೋದರೆ ಅಲ್ಲಿ ಯಾರನ್ನಾದರೂ ಕೇಳಿಕೊಂಡು ಹೋದರಾಯ್ತು.ಎಂದು  ಕೊಂಡೆ. ನನ್ನ ಮೇಜಿನ ಮೇಲಿದ್ದ  ರೈಲ್ವೆ ವೇಳಾಪಟ್ಟಿ ಕಣ್ಣಿನೆ ಬಿತ್ತು. ಅರಸೀಕೆರೆಗೆ ಬಸ್ ನಲ್ಲಿ ಹೋಗಬೇಕೆಂದರೆ ಹರಮ ಸಂಕಟ. ಟ್ರೈನ್ ನಲ್ಲಿ ಹೋದರಾಯ್ತು, ಎಂದು                           ವೇಳಾಪಟ್ಟಿ ನೋಡಿದೆ. ಬೆಳೆಗ್ಗೆ 8.00ಕ್ಕೆ ಟ್ರೈನ್ ಇದೆ. ಹೊರಡುವ ನಿರ್ಧಾರ ಮಾಡಿ ಮಲಗಿದೆ. ಬೆಳಿಗ್ಗೆ ಎದ್ದವನೇ ಮೊದಲ್ಯು ಮಾಡಿದ ಕೆಲಸವೆಂದರೆ  ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜರಿಗೆ ಫೋನ್ ಮಾಡಿದ್ದು. ಅವರಾದರೋ ಮೊಬೈಲ್ ನೂ ಮನೆಯಲ್ಲಿಯೇ ಬಿಟ್ಟು ವಾಕಿಂಗ್ ಹೋಗಿದ್ದರು. ಪತ್ನಿ ಭಾರತಿ ಹಲೋ ಎಂದರು.ವಾಕಿಂಗ್ ಹೋಗಿರುವ ವಿಷಯ ತಿಳಿಸಿದರು. ಅವರಿಗೆ ವಿಷಯ ತಿಳಿಸಿ ವಾಕಿಂಗ್ ನಿಂದ ಬಂದ ಕೂಡಲೇ ಮಾತನಾಡಲು ಹೇಳಿದೆ. ನಂತರ  ಬಾಣಾವರದ ಸಮೀಪ  ಎಲ್ಲಿ ಅಂಬುದನ್ನು  ಗೊತ್ತು ಮಾಡಿಕೊಳ್ಳಲು ಅರಸೀಕೆರೆಯ ಮಿತ್ರ ಸುಬ್ಬಣ್ಣನಿಗೆ ಫೋನ್ ಮಾಡಿದೆ. ಅವರು ಸರಿಯಾಗಿ ಗುರುತು ಹೇಳಿದರು..................ಮುಂದೇನಾಯ್ತು ಎಂಬುದನ್ನು ನಾಳೆ ಬರೆಯುವೆ.

 
                       


Add caption


ಸ್ವಾಮಿಗಳ ಅಮೃತಶಿಲಾ ಮೂರ್ತಿ ಇರುವ ಆಶ್ರಮ

ಆಶ್ರಮದ ಮುಂಭಾಗದ ಗೋಪುರದಲ್ಲಿ ಸ್ವಾಮಿಗಳ ವಿಗ್ರಹ

ಇಲ್ಲಿ ಕಾಣುವ   ಮಂಗಳೂರು ಹಂಚಿನ ಮನೆಯೊಳಗೆ ಇರುವ ನೆಲಮಾಳಿಗೆಯೇ  ಸ್ವಾಮಿಗಳು ತಪಸ್ಸು ಮಾಡುತ್ತಿದ್ದ ಪುಣ್ಯಸ್ಥಳ.

ನೆಲಮಾಳಿಗೆಯಲ್ಲಿ ಸ್ವಾಮಿಗಳು ಪ್ತಪಸ್ಸು ಮಾಡುತ್ತಿದ್ದ ಸ್ಥಳದ ಜೀರ್ಣೋದ್ಧಾರವಾಗಿದ್ದು ಅಲ್ಲಿ ಸ್ವಾಮಿಗಳ ಫೋಟೋ ಇಟ್ಟು ಅದರೆದುರು ಕೃಷ್ಣಾಜಿನ  ಹಾಸಲಾಗಿದೆ.

ಆಶ್ರಮದ ದೇವಾಲಯದಲ್ಲಿ ಈಶ್ವರ ವಿಗ್ರಹ


ಆಶ್ರಮದಲ್ಲಿರುವ  ಮೈಸೂರು ಮಹಾರಾಜ ಚಾಮರಾಜ ಒಡೆಯರ್ ಮತ್ತು ಸಿದ್ದಗಂಗಾ ಶ್ರೀಗಳ ಆಳೆತ್ತರದ ಚಿತ್ರ.





ಶರಣೆಯರಾದ ಶರಣಮ್ಮ ಮತ್ತು ಕಲ್ಯಾಣಮ್ಮ ಇವರ ಸಮಾಧಿ ಇಲ್ಲಿದೆ

ಶರಣೆಯರ ಸಮಾಧಿ

ಶರಣೆಯರ ಸಮಾಧಿ

ಶರಣೆಯರ ಸಮಾಧಿ
ಧ್ಯಾನ ಮಂದಿರ ಮತ್ತು ಕಲ್ಯಾಣ ಮಂಟಪ


ಸ್ವಾಮೀಜಿಯರಕಾಲದ    ಜೊಂಬು ನೇರಲೆ ಮರ

ಬನ್ನಿ ಮಂಟಪ

ಸ್ವಾಮೀಜಿ ಉಪಯೋಗಿಸುತ್ತಿದ್ದ ಭಾವಿ

ಸ್ವಾಮೀಜಿಯವರ ಪೂರ್ವಾಶ್ರಮದ ಮರಿಮಗ ಪರಮೇಶ್ವರಪ್ಪನವರ ಮನೆಯಲ್ಲಿ ಸಾಹಿತಿ ಸಂಶೋದಕ ಡಾ. ಶ್ರೀವತ್ಸ ವಟಿಯವರೊಡನೆ

ಆಶ್ರಮದ ಚಟುವಟಿಗಳಿಗೆ ಸಾಕ್ಶಿ

ಈಗಿನ ಶ್ರೀ ಬಸವಲಿಂಗ ಸ್ವಾಮೀಜಿಯವರೊಡನೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜ್ ಮತ್ತು ಸಂಶೋಧಕ  ದಾ.ಶ್ರೀವತ್ಸ ಎಸ್.ವಟಿ

 ಶ್ರೀ ಬಸವಲಿಂಗ ಸ್ವಾಮೀಜಿಯವರು

ಶ್ರೀ ಬಸವಲಿಂಗ ಸ್ವಾಮೀಜಿಯವರೊಡನೆ ವೇದಸುಧೆಯ ಗೌರವ ಸಂಪಾದಕರಾದ ಶ್ರೀ ಕವಿ ನಾಗರಾಜ್ ಮತ್ತು ಸಂಪಾದಕ ಹರಿಹರಪುರಶ್ರೀಧರ್

ಮುಕುಂದೂರು ಸ್ವಾಮಿಗಳು


1966 ನೇ ಇಸವಿ. ಶಾಸ್ತ್ರಿಗಳು ಬೆಳೆಗೆರೆಯಲ್ಲಿ ಇದ್ದಾರೆ.ನಿತ್ಯವೂ ಬೆಳಿಗ್ಗೆ ಸಮಯ ಸ್ವಲ್ಪ ಹೊತ್ತು ಧ್ಯಾನಮಾಡುವ ಪದ್ದತಿ. ಅಂದು ಧ್ಯಾನದಲ್ಲಿ ಕುಳಿತಿದ್ದ    ಸ್ವಲ್ಪಹೊತ್ತಿನಲ್ಲೇ .........     . ಶಾಸ್ತ್ರಿಗಳು ಮುಕುಂದೂರು ಸ್ವಾಮಿಗಳ ಆಶ್ರಮದ ಬಾಗಿಲಲ್ಲಿ ನಿಂತಂತೆ..... ಕೌಪೀನವನ್ನು ಮಾತ್ರ ಧರಿಸಿದ್ದ ಸ್ವಾಮಿಗಳು.ಆಶ್ರಮದ ಒಳಗಿನಿಂದ ಛಂಗನೆ ನೆಗೆದು ಹೊರಬಂದು ಇವರ ಮುಂದೆ ನಿಂತಂತೆ ದೃಷ್ಯವನ್ನು ಕಂಡು ಶಾಸ್ತ್ರಿಗಳು ಚಕಿತರಾಗುತ್ತಾರೆ. ಪೈಲ್ವಾನರಂತೆ ತೊಡೆತಟ್ಟಿ "ಕರೆಯೋ ಅದ್ಯಾರು ಬರ್ತಾರೆ ಕುಸ್ತೀಗೆ" ...ಅಂತ ಹಸನ್ಮುಖರಾಗಿ ನಿಲ್ಲುತ್ತಾರೆ.
"ಏನ್ ಸ್ವಾಮಿ ,ನೀವು ಎಷ್ಟು ವರ್ಷಗಳಿಂದ ಒಂದೇ ತರ ಇದ್ದೀರಲ್ಲಾ! ಸ್ವಲ್ಪ ನಾದ್ರೂ ಏರು ಪೇರು ಕಾಣುವುದಿಲ್ಲವಲ್ಲಾ!!" ಅಂತಾ ಶಾಸ್ತ್ರಿಗಳು ಸ್ವಾಮಿಗಳಲ್ಲಿ ಹೇಳ್ತಾರೆ. ..." ಇವನೆಲ್ಲಿ ಬದಲಾಗ್ತಾನೆ..ಇದ್ ಹಂಗೇ ಇರ್ತಾನೆ...ಅಂತಾ ಹೇಳ್ತಾ ಆಶ್ರಮದ ಒಳ ಹೋಗುತ್ತಾರೆ......ಶಾಸ್ತ್ರಿಗಳಿಗೆ ಎಚ್ಚರವಾಗಿ ಕಣ್ ಬಿಡುತ್ತಾರೆ.ಮನದ ತುಂಬೆಲ್ಲಾ ಮುಕುಂದೂರು ಸ್ವಾಮಿಗಳೇ ತುಂಬಿಹೋಗಿದ್ದಾರೆ. ಧ್ಯಾನ ಸ್ಥಿತಿಯಲ್ಲಿದ್ದಾಗ  ಸ್ವಾಮಿಗಳ  ಅಂತಹಾ ಅದ್ಭುತ ದರ್ಶನ!!
ಒಂದು ದಿನ ಕಳೆಯುತ್ತೆ. ಅದರ ಮಾರನೆಯ ದಿನದ ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ "ಮುಕುಂದೂರು ಸ್ವಾಮಿಗಳ  ನಿಧನ ವಾರ್ತೆ ಪ್ರಕಟವಾಗಿರುತ್ತೆ....... ಶಾಸ್ತ್ರಿಗಳಿಗೆ ಅಂದು ದರ್ಶನ ಕೊಟ್ಟ    ಅದೇ ಸಮಯಕ್ಕೆ  ಸ್ವಾಮಿಗಳು ಶರೀರವನ್ನು ತ್ಯಜಿಸಿರುತ್ತಾರೆ........


        ಯಾಕೋ ಇವತ್ತು ಮುಕುಂದೂರು ಸ್ವಾಮಿಗಳ ನೆನಪು ಬಹಳವಾಗಿ ಆಗ್ತಿದೆ. ಶಾಲೆಗೆ ಹೋಗಿಯೇ ಇಲ್ಲ. ತನ್ನ ಪೂರ್ವಾಶ್ರಮದ ಬಗ್ಗೆ ಎಲ್ಲೂ ಹೇಳಿಕೊಂಡೇ ಇಲ್ಲ.ಇವರ ವಯಸ್ಸಿನ ಬಗ್ಗೆ ಸರಿಯಾದ ಮಾಹಿತಿಯೇ ಇಲ್ಲ.ಯಾವ ಗುರುವಿನ ಹತ್ತಿರ ಏನು ಉಪದೇಶ ಪಡೆದರೋ ಗೊತ್ತಿಲ್ಲ. ಪಕ್ಕಾ ಹಳ್ಳೀ ಮಾತು. ಯೋಗ ಅನ್ನೋದಕ್ಕೆ ಯೇಗ ಅಂತಾಲೇ ಹೇಳ್ತಿದ್ರಂತೆ.ಆದರೆ ಪ್ರತಿಯೊಂದು ಮಾತಲ್ಲೂ ಅಧ್ಯಾತ್ಮ ಅಡಗಿರುತ್ತಿತ್ತು. ಸ್ವಾಮಿಗಳು ಶರೀರರವನ್ನು ತ್ಯಜಿಸಿದಾಗ ನಡೆದ ಪವಾಡವನ್ನು  ಕಂಡ ಜನ ಇನ್ನೂ ಬದುಕಿರುವುದರಿಂದ ಇದೊಂದು  ಕತೆಯಲ್ಲ. ನಡೆದ ಘಟನೆ.  ಮೊದಲಭಾಗದಲ್ಲಿ  ಆ ಘಟನೆಯನ್ನು ತಿಳಿಸಿ ನಂತರ  ಸ್ವಾಮೀಜಿಯವರನ್ನು ಕುರಿತಾದ ಬಿಳಿಗೆರೆ ಕೃಷ್ಣಶಾಸ್ತ್ರಿಗಳ  "ಯೇಗದಾಗೆಲ್ಲಾ ಐತೆ" ಪುಸ್ತಕದಿಂದ ಆಯ್ದ ಕೆಲವು ಘಟನೆಗಳನ್ನು ಮುಂದಿನ ದಾರಾವಾಹಿಯಾಗಿ    ಓದುಗರಲ್ಲಿ ಹಂಚಿಕೊಳ್ಳುತ್ತೇನೆ.